ಭೀಟಾ
ಉತ್ತರಪ್ರದೇಶ ರಾಜ್ಯದ ಅಲಹಾಬಾದ್ ಪಟ್ಟಣಕ್ಕೆ ನೈಋತ್ಯದಲ್ಲಿ 18 ಕಿಮೀ ದೂರದಲ್ಲಿರುವ ಒಂದು ಪ್ರಾಚೀನ ಸ್ಥಳ. 1871-72ರಲ್ಲಿ ಸರ್ ಜಾನ್ ಮಾರ್ಷಲ್ ಮತ್ತು ಬಾಬು ಶಿವಪ್ರಸಾದ್ ಇಲ್ಲಿಯ ದಿಬ್ಬಗಳನ್ನು ಪರಿಶೋಧಿಸಿ, ಕೆಲವು ಶಾಸನ ಹಾಗೂ ಪ್ರಾಚ್ಯವಸ್ತುಗಳನ್ನು ಸಂಗ್ರಹಿಸಿ ಅವುಗಳ ವಿವರಗಳನ್ನು ಪ್ರಕಟಿಸಿದರು. ಮತ್ತೆ 1915-16ರಲ್ಲಿ ಸರ್ ಜಾನ್ ಮಾರ್ಷಲ್ ಇಲ್ಲಿ ಉತ್ಖನನ ನಡೆಸಿ ಕೆಲವು ನೂತನ ಶಿಲಾಯುಗದ ಉಪಕರಣಗಳನ್ನೂ ಬೆಳಕಿಗೆ ತಂದರು. 

	ಭೀಟಾದಲ್ಲಿ ಐವತ್ತಕ್ಕೂ ಹೆಚ್ಚು ಇಟ್ಟಿಗೆಯ ಕಟ್ಟಡ ಅವಶೇಷಗಳು ಕಂಡು ಬಂದವು. ಇವು ಮೌರ್ಯರ ಕಾಲಕ್ಕೂ ಹಿಂದಿನವು ಎಂಬ ಅಭಿಪ್ರಾಯವಿದೆ. ಇವುಗಳಲ್ಲಿ ಮುಖ್ಯವಾದ್ದು ವಾಣಿಜ್ಯ ಸಂಘಗೃಹ; ಇಲ್ಲಿ ಲಭ್ಯವಾದ ಮಣ್ಣಿನ ಮುದ್ರೆಯ ಅಚ್ಚೊಂದರ ಮೇಲೆ 'ಸಹಿಜಿತಿಯೆ ನಿಗಮಸ್ ಎಂಬ ಆಲೇಖವಿದೆ. ಈ ಊರ ಸುತ್ತಿನ ಗೋಡೆಯ ಅವಶೇಷವೂ ಗವನಾರ್ಹ. ಇಲ್ಲಿ ಕುಷಾಣ ಹಾಗೂ ಗುಪ್ತಕಾಲೀನ ಸ್ತರಗಳಲ್ಲಿ ನೂತನ ಶಿಲಾಯುಗದ ಉಪಕರಣಗಳು ದೊರೆತಿದ್ದು ಕುತೂಹಲಕ್ಕೆ ಕಾರಣವಾದವು. ಸಮೀಪದ ಬೆಟ್ಟಗಾಡುಗಳಲ್ಲಿದ್ದ ಹಾಗೂ ಈ ಉಪಕರಣಗಳನ್ನು ಬಳಸುತ್ತಿದ್ದ ಒಂದು ಜನಾಂಗ ಇಲ್ಲಿಗೆ ಬಂದುಹೋದಾಗ ಇವು ಇಲ್ಲಿ ಸೇರಿಹೋಗಿರಬೇಕು ಅಥವಾ ಈ ಉಪಕರಣಗಳನ್ನು ಧಾರ್ಮಿಕ ಉದ್ದೇಶಗಳಿಗೆ ಬಳಸುತ್ತಿದ್ದಿರಬೇಕು ಎಂದು ವಿದ್ವಾಂಸರು ಊಹಿಸಿದ್ದಾರೆ. 

	ಭೀಟಾದಲ್ಲಿ ನಾಲ್ಕು ಶಿಲಾಶಾಸನಗಳು ಮತ್ತು ಹಲವಾರು ಮುದ್ರಾಲೇಖಗಳು ಲಭ್ಯವಾಗಿವೆ. ಇವು ಬೇರೆ ಬೇರೆ ಕಾಲಕ್ಕೆ ಸೇರಿದವು. ಮುದ್ರೆ ಮುದ್ರಿಕೆಗಳು ಬೇರೆ ಬೇರೆ ಸ್ವರೂಪದವು; ಇವನ್ನು ಶಿಲೆ, ತಾಮ್ರ, ದಂತ ಹಾಗೂ ಜೇಡಿಮಣ್ಣಿನಿಂದ ತಯಾರಿಸಿದೆ. ಧಾರ್ಮಿಕ ಸ್ವರೂಪದ ಮುದ್ರೆಗಳಲ್ಲಿ ತ್ರಿಶೂಲ, ನಂದಿ, ಲಿಂಗ, ಸರಸ್ವತಿ, ವಾಸುದೇವ, ಲಕ್ಷ್ಮಿ, ಶಂಖಚಕ್ರ, ಮಹೇಶ್ವರ, ಬುದ್ಧ ಮುಂತಾದವನ್ನು ಚಿತ್ರಿಸಿದೆ. ವಾಣಿಜ್ಯ ಸ್ವರೂಪದ ಮುದ್ರೆಗಳಲ್ಲಿ 'ನಿಗಮವೆಂಬ ಆಲೇಖ್ಯವಿದೆ. ಕೆಲವು ಮುದ್ರೆಗಳಲ್ಲಿ ಚಿತ್ರಗ್ರಾಮ, ರುದಿಕೋಟ, ಜಾತೇಯ ಮತ್ತು ವಿಚೀ ಗ್ರಾಮಗಳ ಉಲ್ಲೇಖವಿದೆ. ವಿಚೀ ಎಂಬ ಹೆಸರೇ ಭೀಟು ಎಂದಾಯಿತೆಂಬುದು ವಿದ್ವಾಂಸರ ಅಭಿಪ್ರಾಯ. ಆಡಳಿತಕ್ಕೆ ಸಂಬಂಧಿಸಿದ ಮುದ್ರೆಗಳಲ್ಲಿ ಕ್ರಿ. ಶ. 2-3 ಹಾಗೂ 3-4ನೆಯ ಶತಮಾನಗಳಿಗೆ ಸೇರಿದ ಲಿಪಿಯಲ್ಲಿ ವೃಷಧ್ವಜ, ಶಿವಮೇಘ ಭೀಮಸೇನ ಎಂಬ ಆಂಧ್ರ ಅರಸರ ಹೆಸರುಗಳನ್ನು ಕಂಡರಿಸಿದೆ. ಮಹಾದೇವಿ ರುದ್ರಮತಿಯ (ಕ್ರಿ.ಶ. 4-5ನೆಯ ಶತಮಾನ) ಹೆಸರುಳ್ಳ ಮುದ್ರೆಯೊಂದಿದೆ. ಮುದ್ರೆಗಳು ಉಲ್ಲೇಖಿಸುವ ಅಧಿಕಾರಿಗಳಲ್ಲಿ ಅಮಾತ್ಯರಾದ ಚಂದ್ರ, ಧರ್ಮದೇವ ಬೋಳ (?), ನಾಗದಾಮ, ಈಶ್ವರಾನನ ಮುಂತಾದವರೂ ದಂಡನಾಯಕರಾದ ಶಂಕರದತ್ತ, ಗ್ರಾಮಬಲ, ಲಾಳ, ಕೇಶವದಾಸ, ಯಜ್ಞ ವೀರ್ಯ ಮುಂತಾದವರೂ ಸೇರಿದ್ದಾರೆ. ಜಯವಸುಧ, ನಾಗದೇವ, ರುದ್ರಸಿಂಹ, ಗೌರೀದಾಸ, ಮನೋರಥ ಮುಂತಾದ ಅನೇಕ ಖಾಸಗಿ ವ್ಯಕ್ತಿನಾಮಗಳೂ ಇವೆ. 

	ಇಲ್ಲಿಯ ಉತ್ಖನನದಲ್ಲಿ ನೂರಿಪ್ಪತ್ತಕ್ಕೂ ಹೆಚ್ಚು ನಾಣ್ಯಗಳೂ ದೊರೆತಿವೆ. ಹಲವು ಮಿತ್ರ, ಕುರ್ಷಾ, ಆಂಧ್ರ, ಕೌಶಾಂಬಿ ಅರಸರಿಗೆ ಸೇರಿದವು. ಒಂದು ಮುದ್ರಾಂಕಿತ ನಾಣ್ಯ ಹಾಗೂ ಒಂದು ಮಧ್ಯಕಾಲೀನ ಮುಸ್ಲಿಮ್ ಅರಸನ ನಾಣ್ಯ ಸಿಕ್ಕಿವೆ. ಇನ್ನು ಕೆಲವು ನಾಣ್ಯಗಳನ್ನು ಯಾರದೆಂದು ಗುರುತಿಸಲು ಸಾಧ್ಯವಾಗಿಲ್ಲ. ಭೀಟಾದಲ್ಲಿ ದೊರೆತ ಮಣ್ಣಿನ ಮiತ್ತು ಇತರ ವಸ್ತು ಹಾಗೂ ಶಿಲ್ಪಗಳನ್ನು ಮೌರ್ಯಪೂರ್ವ, ಮೌರ್ಯ, ಶುಂಗ ಮತ್ತು ಆಂಧ್ರ, ಕುಷಾಣ, ಗುಪ್ತ ಹಾಗೂ ಗುಪ್ತೋತ್ತರ ಕಾಲಕ್ಕೆ ಸೇರಿಸಬಹುದು. ಇವುಗಳಲ್ಲಿ ಕೆಲವು ಲಕ್ನೊ ವಸ್ತು ಸಂಗ್ರಹಾಲಯದಲ್ಲಿವೆ.						
	(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ